ಬೇಲಿ, ಸಾಮ್ಯುಯೆಲ್
1791-1870. ಆರ್ಥಿಕ ಮತ್ತು ರಾಜಕೀಯ ತತ್ತ್ವಜ್ಞ ಮತ್ತು ಬರಹಗಾರ. ಇಂಗ್ಲೆಂಡಿನ ಶೆಫೀಲ್ಡ್‍ನಲ್ಲಿ ಜನನ. ಕೆಲವು ವರ್ಷ ವ್ಯಾಪಾರಸ್ಥನೂ 1831ರಲ್ಲಿ ಶೆಫೀಲ್ಡ್ ಬ್ಯಾಂಕಿಂಗ್ ಕಂಪನಿಯ ಅಧ್ಯಕ್ಷನೂ ಆಗಿದ್ದ. ಮುಂದೆ ಈತನ ಆಸಕ್ತಿ ವ್ಯಾಪಾರದಿಂದ ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರಗಳ ಕಡೆ ಹರಿಯಿತು. 1832 ಮತ್ತು 1834ರಲ್ಲಿ ಚುನಾವಣೆಗೆ ನಿಂತು ಸೋತ. ಅನಂತರ ತನ್ನೆಲ್ಲ ವೇಳೆಯನ್ನೂ ಬರವಣಿಗೆಗೆ ಉಪಯೋಗಿಸಿಕೊಂಡ. 

1821ರಲ್ಲಿ ಈತ ಪ್ರಕಟಿಸಿದ ಪುಸ್ತಕ ಪಾರ್ಮೇಷನ್ ಅಂಡ್ ಪಬ್ಲಿಕೇಷನ್ ಆಫ್ ಒಪಿನಿಯನ್ಸ್. ಈ ಗ್ರ್ರಂಥದಲ್ಲಿ ಒಬ್ಬ ವ್ಯಕ್ತಿಯ ಅಭಿಪ್ರಾಯ ಪ್ರಕಟಣೆ ಸ್ವತಂತ್ರವಾದದು ಎಂಬ ತತ್ತ್ವವನ್ನು ಪ್ರತಿಪಾದಿಸಿ ಅಭಿಪ್ರಾಯಗಳಿಗಾಗಿ ಆತನನ್ನು ಶಿಕ್ಷಿಸಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ. 1825ರಲ್ಲಿ ಈತ ನೇಚರ್, ಮೆಷರ್ ಅಂಡ್ ಕಾಸಸ್ ಆಫ್ ವ್ಯಾಲ್ಯೂ ಎಂಬ ಗ್ರಂಥ ಪ್ರಕಟಿಸಿದ. ಡೇವಿಡ್ ರಿಕಾರ್ಡೊ, ಜಾನ್ ಸ್ಟುವರ್ಟ್ ಮಿಲ್‍ರ ಮೌಲ್ಯ ಸಿದ್ಧಾಂತಗಳನ್ನು ಈ ಗ್ರಂಥದಲ್ಲಿ ಕಟುವಾಗಿ ಟೀಕಿಸಿದ. ಅದೇ ಗ್ರಂಥದಲ್ಲಿ ಈತ ವಿನಿಮಯದರದ ಮಾಧ್ಯಮದಲ್ಲಿಯ ಆರ್ಥಿಕ ಮೌಲ್ಯದ ಬಗ್ಗೆ ತನ್ನ ನಂಬಿಕೆಯನ್ನು ವ್ಯಕ್ತಪಡಿಸಿದ. ಮಾನವ ಮನಸ್ಸಿನ ವಿಷಯದ ಮೇಲೆ 1855, 1858 ಮತ್ತು 1863ರಲ್ಲಿ ಪ್ರಕಟಿಸಿದ ಪತ್ರಮಾಲೆಗಳಲ್ಲಿ ವಸ್ತುಗಳಿಗೆ ಅಸ್ತಿತ್ವವೇ ಹೊರತು ಅವುಗಳಿಂದ ಪ್ರತ್ಯೇಕಿಸಿ ಹೇಳುವ ಗುಣಗಳಿಗೆ ಅಸ್ತಿತ್ವವಿಲ್ಲ. ಗುಣಗಳು ನಾಮಮಾತ್ರ ಎಂಬವಾದ, ನಿಯತಿವಾದ ಮತ್ತು ಪ್ರಯೋಜಕ ವಾದಗಳನ್ನು ಎತ್ತಿ ಹಿಡಿದ. ಇದಲ್ಲದೆ ಬೇಲಿ ಶಿಕ್ಷಣ, ಪಾರ್ಲಿಮೆಂಟ್ ಸುಧಾರಣೆ, ಜ್ಯೇಷ್ಠಾಧಿಕಾರ ಮತ್ತು ಷೇಕ್ಸ್‍ಪ್ಪಿಯರನ ನಾಟಕಗಳ ಮೇಲೆ ವ್ಯಾಪಕವಾಗಿ ಬರೆದು ಪ್ರಕಟಿಸಿದ. 1870 ಜನವರಿ 8 ರಂದು ತೀರಿಕೊಂಡ.  							 (ಸಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ